ಬೀಜಿಂಗ್

ಬೀಜಿಂಗ್. ಚೀನ ಜನತಾ ಗಣರಾಜ್ಯದ ರಾಜಧಾನಿ. ಪ್ರಪಂಚದ ಅತ್ಯಂತ ಪ್ರಾಚೀನ ನಗರಗಳಲ್ಲೊಂದು. ಉತ್ತರ ಚೀನಾ ಬಯಲಿನ ತುದಿಯಲ್ಲಿ ಹೋಪೇ ಪ್ರಾಂತ್ಯದೊಳಗೆ ಬೇ ಮತ್ತು ಯಂಗೆ-ಡಿಂಗ್ ನದಿಗಳ ನಡುವೆ (ಉ.ಅ. 390 54' ಮತ್ತು ಪೂ. ರೆ, 1160 28' ಮೇಲೆ) ಇದೆ. ಚೀನದ ಮಹಾಗೋಡೆಯ ಆಗ್ನೇಯಕ್ಕೆ 56 ಕಿ.ಮೀ. ದೂರದಲ್ಲಿರುವ ಬೀಜಿಂಗ್ ಚೀನದ ಚರಿತ್ರೆಯ ಸಾಕಾರ ರೂಪದಂತಿದೆ. ದೀರ್ಘಕಾಲದವರೆಗೆ ಚೀನದ ಬೃಹತ್ ಸಾಮ್ರಾಜ್ಯದ ರಾಜಧಾನಿಯಾಗಿದ್ದು ಅದರ ಸಂಸ್ಕøತಿಯ ತೇಜೋಕೇಂದ್ರದಂತಿರುವ ಬೀಜಿಂಗ್‍ನಂಥ ನಗರಗಳು ತೀರಾ ಕಡಿಮೆ. ಅದು ಸೂಕ್ಷ್ಮಾಕಾರದ ಚೀನ. ಅದನ್ನು ಪೂರ್ಣವಾಗಿ ಅರಿಯದೆ ಚೀನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ತನ್ನ ಸಾಂಸ್ಕøತಿಕ ಮತ್ತು ಕಲಾನೈಪುಣ್ಯದ ಪರಂಪರೆಯಿಂದಾಗಿ ಅದೊಂದು ಅತಿ ಪ್ರಾಚೀನ ನಗರವಾಗಿರುವಂತೆ, 1949 ರಲ್ಲಿ ಚೀನ ಜನತಾ ಗಣರಾಜ್ಯದ ರಾಜಧಾನಿಯಾದಂದಿನಿಂದ ಅತ್ಯಾಧುನಿಕತೆ ಪಡೆದಿದೆ. ಜನಸಂಖ್ಯೆ 7362476 (2000). 

ಕ್ರಿ. ಪೂ. 6ನೆಯ ಶತಮಾನದ ಸುಮಾರಿಗೆ ಈಗಿನ ಬೀಜಿಂಗಿನ ಎಡೆಯಲ್ಲಿ ಅತ್ಯುತ್ತರದ ರಾಜ್ಯವಾದ ಯೆನ್‍ನ ರಾಜಧಾನಿ ಚಿ ಇತ್ತು. ಹಾನ್ ರಾಜವಂಶದ ಕಾಲದಲ್ಲಿ (ಕ್ರಿ.ಪೂ. 202-ಕ್ರಿ.ಶ. 221) ಅವನ್ನು ಯೂ ಪೈಪಿಂಗ್ ಎಂದೂ ಚಾಂಗ್ ವಂಶದ ಕಾಲದಲ್ಲಿ (618-906) ಫಾನ್‍ಯಾಂಗ್ ಎಂದೂ ಕರೆಯುತ್ತಿದ್ದರು. 10 ರಿಂದ 14 ನೆಯ ಶತಮಾನದ ವರೆಗಿನ ಕಾಲದಲ್ಲಿ ಅದು ಅನೇಕ ರಾಜವಂಶಗಳ ರಾಜಧಾನಿಯಾಯಿತು. ಮಂಗೋಲಿಯನ್ನರ (ಯು ಆನ್ ರಾಜವಂಶ) ಕಾಲದಲ್ಲಿ ಅದು ಟಾಟು (ಮಹಾರಾಜಧಾನಿ) ಎನಿಸಿಕೊಂಡಿತು. ಮಿಂಗ್ ರಾಜವಂಶದ (1368-1644) 1 ನೆಯ ದೊರೆ ನ್ಯಾನ್‍ಕಿಂಗನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಆಗ ಬೀಜಿಂಗಿಗೆ ಪೈಪಿಂಗ್ (ಉತ್ತರದ ಶಾಂತಿ) ಎಂಬ ಹೆಸರು ಬಂತು. ಆ ವಂಶದ 3 ನೆಯ ದೊರೆ ರಾಜಧಾನಿಯನ್ನು ಮತ್ತೆ ಮೊದಲಿನ ಸ್ಥಳಕ್ಕೆ ಒಯ್ದು ಅದಕ್ಕೆ ಬೀಜಿಂಗ್ (ಉತ್ತರದ ರಾಜಧಾನಿ) ಎಂದು ಹೆಸರಿಟ್ಟ. ಈಗಿರುವ ಅರಮನೆ, ದೇವಾಲಯ ಹಾಗೂ ನಗರದ ಗೋಡೆಗಳ ನಿರ್ಮಾಣ ಅವನಿಂದಲೇ ಪ್ರಾರಂಭವಾಯಿತು. 1928ರ ವರೆಗೂ ಇದು ರಾಜಧಾನಿಯಾಗಿ ಮುಂದುವರೆಯಿತು. ಆ ಬೀಜಿಂಗಿಗೆ ಪೈಪಿಂಗ್ ಎಂಬ ಹೆಸರಾಯಿತು. ಆಗ ಅದರ ರಾಜಕೀಯ ಮಹತ್ವ ಸ್ವಲ್ಪ ಕುಗ್ಗಿತಾದರೂ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಹತ್ವ ಕಡಿಮೆಯಾಗಲಿಲ್ಲ. 1937ರ ಜುಲೈಯಿಂದ 1945ರ ಸೆಪ್ಟಂಬರಿನವರೆಗೆ ಬೀಜಿಂಗ್ ಜಪಾನಿನ ವಶದಲ್ಲಿತ್ತು. ಮುಂದೆ ಅಂತರ್ಯುದ್ಧದ ಕಾಲದಲ್ಲಿ 1949ರ ಫೆಬ್ರವರಿ 1 ರಂದು ಅದು ಘರ್ಷಣೆಯಿಲ್ಲದೆ ಜನತಾ ವಿಮೋಚನಾ ಸೇನೆಯ ವಶವಾಯಿತು. 1949ರ ಅಕ್ಟೋಬರ್ 1 ರಂದು ಚೀನಾದಲ್ಲಿ ಜನತಾ ಸರ್ಕಾರ ಸ್ಥಾಪಿತವಾದಾಗ ಬೀಜಿಂಗ್ ಮತ್ತೆ ರಾಜಧಾನಿಯಾಗಿ ತನ್ನ ಮೊದಲಿನ ಹೆಸರನ್ನು ಪಡೆಯಿತು. ಈಗ ಇದು ಬೀಜಿಂಗ್ ಆಗಿದೆ.

ಮೂಲ ಅಥವಾ ಮುಖ್ಯ ಬೀಜಿಂಗ್ ನಗರದ ವಿಸ್ತೀರ್ಣ ಸುಮಾರು 64 ಚ.ಕಿ.ಮೀ. ಅದರಲ್ಲಿ ಗೋಡೆಗಳಿಂದ ಆವೃತವಾದ ಎರಡು ಮುಖ್ಯ ಭಾಗಗಳಿವೆ. ಟಾಟರ್ ನಗರವೆಂದು ಕರೆಯಲಾಗುವ ಒಳಗಿನ ಉತ್ತರ ವಿಭಾಗ ಚೌಕಾಕಾರವಾಗಿದೆ. ಅದನ್ನು ಸುತ್ತಿರುವ ಗೋಡೆಗಳು 15 ಮೀ. ಎತ್ತರವಾಗಿಯೂ 18 ಮೀ. ದಪ್ಪವಾಗಿಯೂ ಇವೆ. ಅವುಗಳಲ್ಲಿ 9 ಹೆಬ್ಬಾಗಿಲುಗಳಿವೆ. ಗೋಡೆಗಳ ಒಟ್ಟು ಉದ್ದ 28 ಕಿ.ಮೀ. ಹೊರನಗರವೆಂದು ಹೆಸರಾಗಿರುವ ದಕ್ಷಿಣದ ವಿಭಾಗ ಆಯಕಾರವಾಗಿದೆ. ಅದರ ಗೋಡೆಗಳ ಎತ್ತರ ಕಡಿಮೆ. ಅವುಗಳಲ್ಲಿ 7 ಹೆಬ್ಬಾಗಿಲುಗಳಿವೆ. ಉತ್ತರದ ವಿಭಾಗದೊಳಗೆ ಮ್ಯಾಂಚೊ ಸರ್ಕಾರದ ಕೇಂದ್ರವಾಗಿದ್ದ ಸಾಮ್ರಾಜ್ಯ ನಗರವೂ ಅದರೊಳಗೆ ಚಕ್ರಾಧಿಪತ್ಯದ ಅರಮನೆಯಿರುವ ನಿಷಿದ್ಧ ನಗರವೂ ಇವೆ. ಸಂಚಾರ ಸೌಲಭ್ಯಕ್ಕಾಗಿ ಗೋಡೆಗಳನ್ನು ಅನೇಕ ಕಡೆಗಳಲ್ಲಿ ಕೆಡಲಾಗಿದೆ. ಬೀಜಿಂಗ್ ನಗರದ ರಚನೆ ಯೋಜನಾಬದ್ಧವಾದ್ದು.

ಬೀಜಿಂಗಿನ ಈಗಿನ ಬೃಹತ್ ನಗರ ಪ್ರದೇಶದ ಸೀಮೆ 1959ರಲ್ಲಿ ನಿರ್ದಿಷ್ಟವಾಯಿತು. ಇದರ ವಿಸ್ತೀರ್ಣ 16,896 ಚ.ಕಿ.ಮೀ. ಇದರಲ್ಲಿ 8 ಚ್ಯುಗಳೂ (ಪೌರಜಿಲ್ಲೆ) 9 ಹೈನ್‍ಗಳೂ (ಕೌಂಟಿ) ಇವೆ. ಪೌರ ಚಟುವಟಿಕೆಗಳನ್ನು ಅನುಸರಿಸಿ ನಗರವನ್ನು ಪ್ರದೇಶವನ್ನು ಮೂರು ಸಮಾಜ ಕೇಂದ್ರೀಯ ವಲಯಗಳಾಗಿ ವಿಭಜಿಸಬಹುದು. ಮೊದಲನೆಯದಾಗಿ ಗೋಡೆಗಳೊಳಗಿನ ಪ್ರವೇಶ. ಇದರಲ್ಲಿ 4 ಚ್ಯುಗಳು ಸೇರುತ್ತವೆ. ಇಲ್ಲಿ ಪುರಾತನ ಅರಮನೆಗಳು, ಸರ್ಕಾರಿ ಕಟ್ಟಡಗಳು, ವಾಣಿಜ್ಯ ಜಿಲ್ಲೆಗಳು ಮತ್ತು ಹಳೆಯ ವಸತಿಗಳು ಇವೆ. ಇದರ ವಿಸ್ತೀರ್ಣ ಒಟ್ಟು ನಗರ ಪ್ರದೇಶದ ಶೇಕಡ 0.4 ರಷ್ಟು. ದ್ವಿತೀಯವಲಯವಲ್ಲಿ ಸಮೀಪದ ಉಪನಗರ ಸೇರಿದೆ. ಇದು ಗೋಡೆಯೊಳಗಿನ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಇದರ ವಿಸ್ತೀರ್ಣ ಒಟ್ಟು ನಗರ ಪ್ರದೇಶದ ಶೇಕಡ 7.6 ರಷ್ಟು. ಇದರಲ್ಲಿ 3 ಚ್ಯುಗಳು ಸೇರುತ್ತವೆ. ಇಲ್ಲಿ ಹೊಸ ಕಾರ್ಖಾನೆಗಳು, ಶಾಲೆಗಳು, ಸರ್ಕಾರಿ ಕಟ್ಟಡಗಳು, ಮತ್ತು ಕಾರ್ಮಿಕರ ನಿದ್ರಾಶಾಲೆಗಳು ಇವೆ. ಇದರ ಹೊರಸೆರಗಿನಲ್ಲಿ ಬೇಸಾಯ ನಡೆಯುತ್ತದೆ. ಮೊದಲನೆಯ ವಲಯದ ನಿವಾಸಿಗಳಿಗೆ ಇಲ್ಲಿಂದ ತರಕಾರಿ, ಹಣ್ಣುಗಳನ್ನು ಒದಗಿಸಲಾಗುತ್ತದೆ. ಮೂರನೆಯ ವಲಯದ ದೂತದ ಉಪನಗರ, ಅದರಲ್ಲಿ 1 ಚ್ಯು ಮತ್ತು ಹೊಸದಾಗಿ ಸೇರಿಸಿದ 9 ಹ್ಸೈನ್ ಇವೆ. ಅದರ ವಿಸ್ತೀರ್ಣ ನಗರ ಪ್ರದೇಶದ ಶೇಕಡ 92 ರಷ್ಟು ಅದು 1 ನೆಯ ವಲಯ ಮತ್ತು ಸಮೀಪದ ಉಪನಗರಗಳಿಗೆ ಕಲ್ಲಿದ್ದಲು, ಕಟ್ಟಿಗೆ, ಕಟ್ಟಡದ ಸಾಮಾನು ಹಾಗೂ ಹೈನು ಪದಾರ್ಥಗಳನ್ನು ಒದಗಿಸುತ್ತ ಆರ್ಥಿಕ ಬುನಾದಿಯಂತೆ ಸಹಾಯಕವಾಗಿದೆ. 

ಬೀಜಿಂಗಿನ ವಾಯುಗುಣ ಮಾನ್‍ಸೂನ್ ಮಾದರಿಯದು. ಅಕ್ಟೋಬರಿನಿಂದ ಮಾರ್ಚ್ ತಿಂಗಳವರೆಗಿನ ಚಳಿಗಾಲದಲ್ಲಿ ತಣ್ಣಗಿನ ಮತ್ತು ಶುಷ್ಕ ವಾತಾವರಣ ಇರುತ್ತದೆ. ಆಗ ನೀರು ಗಡ್ಡೆ ಕಟ್ಟುತ್ತದೆ. ಬೇಸಗೆಯಲ್ಲಿ ಉಷ್ಣತೆ 260ಅ ಗಿಂತ ಹೆಚ್ಚಾಗುತ್ತದೆ. ಜುಲೈನಲ್ಲಿ ಉಷ್ಣತೆ ಗರಿಷ್ಠವಾಗುತ್ತದೆ. ಆಗ ಆದ್ರ್ರತೆಯೂ ಹೆಚ್ಚು. ವರ್ಷದ ಸರಾಸರಿ ಮಳೆ 63 ಸೆಂ.ಮೀ. ಇದರಲ್ಲಿ ಶೇಕಡ 75 ರಷ್ಟು ಮಳೆ ಬೇಸಗೆಯಲ್ಲಿ ಬೀಳುತ್ತದೆ. ಜುಲೈ ಹೆಚ್ಚು ಮಳೆಯ ತಿಂಗಳು. ಆಗ ಸರಾಸರಿ 22 ಸೆಂ.ಮೀ. ಮಳೆಯಾಗುತ್ತದೆ. ಏಪ್ರಿಲ್ ತಿಂಗಳ ಕೆಲವು ದಿನಗಳಲ್ಲಿ ಗೋಬಿ ಮರುಭೂಮಿಯಿಂದ ಅಹಿತಕರ ದೂಳಿನ ಬಿರುಗಾಳಿ ಬೀಸುವುದುಂಟು.

1950-1970 ರಲ್ಲಿ ಆಗಿನ ಬೀಜಿಂಗಿನಲ್ಲಿ ಸುಮಾರು 1,85,00,000 ಚ.ಮೀ. ಗಳಷ್ಟು ಸ್ಥಳಾವಕಾಶದ ವಸತಿ ಸೌಕರ್ಯವನ್ನು ನಿರ್ಮಿಸಲಾಯಿತು. ಮೊದಲನೆಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ (1953-57) ವಸತಿ ಯೋಜನೆಗಳು ನಗರದ ಪಶ್ಚಿಮದ ಹೊರವಲಯದಲ್ಲಿ ಸಾಂದ್ರೀಕೃತವಾಗಿದ್ದವು. 1958 ರ ಅನಂತರ ಆನ್‍ಟಿಂಗ್ ಮತ್ತು ಟೆ ಷೆಂಗ್ ಹೆಬ್ಬಾಗಿಲುಗಳ ನಡುವಣ ಉತ್ತರದ ಹೊರವಲಯದಲ್ಲಿ ಹೊಪಿಂಗ್ ಲಿಯ ಹೊಸ ಜನ ವಸತಿಯ ಸುತ್ತ ಮನೆಗಳ ನಿರ್ಮಾಣ ಪ್ರಾರಂಭವಾಯಿತು. ಪೂರ್ವದ ಚಿಯೆನ್ ಕ್ವೊ ನಗರ ದ್ವಾರದ ಹೊರವಲಯದಲ್ಲಿ ಅದಕ್ಕೆ ಹತ್ತಿರವಿರುವ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರ ಕುಟುಂಬಗಳಿಗಾಗಿ ವಸತಿ ಗೃಹಗಳನ್ನು ಕಟ್ಟಲಾಗಿದೆ. ಕೋಟೆಯ ಒಳಗಿನ ಹಳೆಯ ವಿಭಾಗಗಳಲ್ಲಿ ಬಹಳ ಹಳೆಯ ಕಟ್ಟಡಗಳನ್ನು ಕೆಡವಿ ಹಲವಂತಸ್ತುಗಳ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ನಗರದ ಪೂರ್ವ ಮತ್ತು ದಕ್ಷಿಣದ ಹೊರಪ್ರದೇಶಗಳಲ್ಲಿ ಕಾರ್ಖಾನೆಗಳ ಕಾರ್ಮಿಕರಿಗಾಗಿ ನಾಲ್ಕು ಮಹಡಿಗಳ ವಸತಿ ಗೃಹಗಳ ನಿರ್ಮಾಣವಾಗಿದೆ. ಕಾರ್ಮಿಕರ ಕುಟುಂಬಗಳ ವರಮಾನಗಳೊಡನೆ ಹೋಲಿಸಿದರೆ ಇವುಗಳ ಬಾಡಿಗೆ ಕಡಿಮೆ.
ಬೀಜಿಂಗ್ ಚೀನದ ಪ್ರಮುಖ ರೈಲ್ವೇ ಕೇಂದ್ರ. ಇಲ್ಲಿ ನಾಲ್ಕು ಪ್ರಧಾನ ಮತ್ತು ಮೂರು ಸ್ಥಳೀಯ ರೈಲ್ವೇ ಮಾರ್ಗಗಳು ಸಂಧಿಸುತ್ತವೆ. ಪ್ರಧಾನ ರೈಲ್ವೇ ಮಾರ್ಗಗಳು ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರಗಳೊಂದಿಗೆ ಪೀಕೀಂಗಿಗೆ ಸಂಪರ್ಕ ಕಲ್ಪಿಸಿವೆ. ಸ್ಥಳೀಯ ರೈಲ್ವೇ ಮಾರ್ಗಗಳು ನಗರ ಪ್ರದೇಶದ ದೂರದ ಸ್ಥಳಗಳನ್ನು ಸಂಪರ್ಕಿಸುತ್ತವೆ. ನಗರ ಪ್ರದೇಶದ 200 ಕಿ.ಮೀ. ವ್ಯಾಸದ ಒಳಗೆ 12 ಹೆದ್ದಾರಿಗಳಲ್ಲಿ ಬಸ್ಸುಗಳು ಪ್ರಯಾಣಿಕರನ್ನು ಒಯ್ಯುತ್ತವೆ. ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರತಿದಿನ 20,00,000 ಪ್ರಯಾಣಿಕರನ್ನು ಕೊಂಡೊಯ್ಯುತ್ತದೆ. ಹತ್ತಿರದ ಸಂಚಾರಕ್ಕೆ ಸೈಕಲ್ಲುಗಳು ಜನಪ್ರಿಯವಾಗಿವೆ. ಬೀಜಿಂಗ್ ಚೀನದ ಪ್ರಮುಖ ನಾಗರಿಕ ವಿಮಾನ ಕೇಂದ್ರ. 

1950 ಮತ್ತು 1960 ರ ದಶಕಗಳಲ್ಲಿ ಆಗಿನ ಬೀಜಿಂಗ್ ಚೀನದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಯಿತು. ಒಂದನೆಯ ಪಂಚವಾರ್ಷಿಕ ಯೋಜನೆ ನಗರದ ಪುನರ್ರಚನೆ ಮತ್ತು ಕೈಗಾರಿಕಾಕರಣಕ್ಕೆ ಮಹತ್ವ ನೀಡಿತು. ಮುಖ್ಯ ನಗರಕ್ಕೆ 40 ಕಿ. ಮೀ. ದೂರದಲ್ಲಿ ಷಿ ಚಿಂಗ್ ಷಾನ್‍ನಲ್ಲಿರುವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಚೀನದ ಅತ್ಯಂತ ದೊಡ್ಡ ಕಾರ್ಖಾನೆಗಳಲ್ಲಿ ಒಂದು. ವಿಶಿಷ್ಟ ಗುಣಗಳ ಉಕ್ಕನ್ನು ತಯಾರಿಸುವ ಅನೇಕ ಕಾರ್ಖಾನೆಗಳೂ ಇಲ್ಲಿವೆ. ಎತ್ತುಗ ಯಂತ್ರ, ಉಗಿಬಂಡಿ, ಮೋಟಾರು ಬಿಡಿಭಾಗಗಳು, ಟ್ರ್ಯಾಕ್ಟರ್‍ಗಳು, ಕುಯ್ಲು ಯಂತ್ರಗಳು ಮತ್ತು ಗಣೀ ಯಂತ್ರಗಳು, ಪೀಕಿಂಗಿನಲ್ಲಿ ತಯಾರಾಗುತ್ತವೆ. ಇದು ಚೀನಾದ ಪ್ರಮುಖ ಜವಳಿ ಕೇಂದ್ರಗಳಲ್ಲೊಂದು. ಕೀಟನಾಶಕ, ರಸಗೊಬ್ಬರ ಮತ್ತು ಪ್ಲಾಸ್ಟಿಕ್ ಹಾಳೆಗಳ ತಯಾರಿಕೆಯೂ ಇಲ್ಲಿ ನಡೆಯುತ್ತದೆ. ಅನೇಕ ಕಲಾ ಮತ್ತು ಕರಕುಶಲ ಕೈಗಾರಿಕೆಗಳು ಇಲ್ಲಿವೆ. ಪೀಕಿಂಗಿನ ಕಂಬಳಿ ಮತ್ತು ಜಮಖಾನ, ಪಿಂಗಾಣಿ, ಜೇಡಶಿಲೆ ಮತ್ತು ಹಸ್ತಿದಂತದ ಕೆತ್ತನೆಯ ಸಾಮನುಗಳು, ಕಂಚು, ಎನ್ಯಾಮೆಲ್, ರಾಳದ ಮೆರುಗಿನ ವಸ್ತುಗಳು. ಲೇಸ್ ಮತ್ತು ಕಸೂತಿಯ ಬಟ್ಟೆಗಳು ಹೆಸರುವಾಸಿಯಾಗಿವೆ. 

ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಉದ್ಯಮಗಳು 1949ರಿಂದ ಈಚಿಗೆ ಬೀಜಿಂಗಿನಲ್ಲಿ ಬೆಳೆದಿವೆ. ಅನೇಕ ಹೋಟೆಲುಗಳು, ವಸತಿ ಗೃಹಗಳು ಹೊಸದಾಗಿ ನಿರ್ಮಿತವಾಗಿವೆ. ಹಳೆಯವು ದುರಸ್ತಿಗೊಂಡು ವಿಸ್ತರಿಸಲ್ಪಟ್ಟಿವೆ. ಸರ್ಕಾರ ವಹಿಸಿಕೊಂಡಿರುವ ಚೀನೀ ಅಂತರರಾಷ್ಟ್ರೀಯ ಪ್ರಯಾಣ ಸೇವಾ ಸಂಸ್ಥೆ ಪರದೇಶದ ಪ್ರವಾಸಿಗಳ ವ್ಯವಸ್ಥೆ ನೋಡಿಕೊಳ್ಳುತ್ತದೆ. ಸಾಗರಾಂತರ ಚೀನೀ ಪ್ರವಾಸಿ ಕೇಂದ್ರದ ಮುಖ್ಯ ಕಚೇರಿ ಒಳಗಿನ ನಗರದಲ್ಲಿದೆ. 

ವಾಂಗ್ ಫೂ ಚಿಂಗ್ ರಸ್ತೆಯಲ್ಲಿರುವ ಟುಂಗ್ ಟಾನ್ ಎಂಬುದು ನಗರದ ಅತ್ಯಂತ ದೊಡ್ಡ ಮಾರುಕಟ್ಟೆ. ಹೋ ಪಿಂಗ್, ನಗರ ದ್ವಾರದ ಹೊರಗಿರುವ ಟೀನ್ ಚಿಯಾವೊ ಹತ್ತಿರವಿರುವ ಟೀನ್ ಇವು ಇನ್ನೆರಡು ಪ್ರಮುಖ ಮಾರುಕಟ್ಟೆಗಳು. ನಗರದ ಪಶ್ಚಿಮ ಭಾಗದಲ್ಲಿ ಹ್ಸಿ ಟಾನ್ ಪೈ-ಟಾ ಮಾರುಕಟ್ಟೆ ವೈವಿಧ್ಯಪೂರಿತವಾದ್ದು.

ರಾಷ್ಟ್ರದ ಪ್ರಧಾನ ರಾಜಕೀಯ ಸಂಸ್ಥೆಗಳು ಬೀಜಿಂಗಿನಲ್ಲಿವೆ. ಸರ್ಕಾರದ ಸರ್ವೋನ್ನತ ಅಂಗವಾದ ರಾಷ್ಟ್ರೀಯ ಜನತಾ ಕಾಂಗ್ರೆಸ್ಸೂ ರಾಜ್ಯ ಪರಿಷತ್ತೂ ಇಲ್ಲಿ ಸಮಾವೇಶಗೊಳ್ಳುತ್ತವೆ.

ಬೀಜಿಂಗಿನ ಆಡಳಿತಕ್ಕಾಗಿ ಬೀಜಿಂಗ್ ಪುರಸಭಾ ಜನತಾ ಕಾಂಗ್ರೆಸ್ ಎಂಬ ಪ್ರಾಧಿಕರಣವಿದೆ. ಕಾರ್ಮಿಕ ಗುಂಪುಗಳು, ಪಡೆಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಧಾರ್ಮಿಕ ವೃತ್ತಗಳಿಂದ ಅದರ 564 ಪ್ರತಿನಿಧಿಗಳನ್ನು ಆರಿಸಲಾಗುತ್ತದೆ. ಪೌರಾಡಳಿತದ ಕಾರ್ಯನಿರ್ವಾಹಕ ಅಂಗವಾದ ಬೀಜಿಂಗ್ ಜನತಾ ಪರಿಷತ್ತಿನ ಸದಸ್ಯರನ್ನೂ ಮೇಯರ್ ಮತ್ತು ಉಪಮೇಯರ್‍ರನ್ನೂ ಕಾಂಗ್ರೆಸ್ ಆರಿಸುತ್ತದೆ. 

ಕ್ವಾನ್-ಟಿಂಗ್‍ನಲ್ಲಿರುವ ಜಲ ವಿದ್ಯುತ್ ಕೇಂದ್ರ 1956 ರಿಂದ ಬೀಜಿಂಗ್ ನಗರಕ್ಕೆ ವಿದ್ಯುತ್ತನ್ನು ಒದಗಿಸುತ್ತಿದೆ. ಉತ್ತರ ಚೀನ ಬಯಲಿನ ಅತ್ಯಂತ ದೊಡ್ಡ ಮಾನವ ನಿರ್ಮಿತ ಜಲಾಶಯದಿಂದ ನಗರ ಪ್ರದೇಶಕ್ಕೆ ಅಗತ್ಯವಾದ ನೀರಿನ ಹೆಚ್ಚಿನ ಭಾಗದ ಪೂರೈಕೆ ಆಗುತ್ತದೆ.

	ಬೀಜಿಂಗಿನ ಅತ್ಯಂತ ದೊಡ್ಡ ಆಸ್ಪತ್ರೆ ವರ್ಷಕ್ಕೆ ಸುಮಾರು 50,000 ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. 1949 ರಿಂದೀಚೆಗೆ 30 ಕ್ಕೂ ಹೆಚ್ಚು ಆಸ್ಪತ್ರೆಗಳನ್ನೂ ಚಿಕಿತ್ಸಾಲಯಗಳನ್ನೂ ಆರೋಗ್ಯ ನಿಲಯಗಳನ್ನೂ ಹೊಸತಾಗಿ ನಿರ್ಮಿಸಲಾಗಿದೆ. ನಗರ ಪ್ರದೇಶದಲ್ಲಿ 25,000 ಕ್ಕೂ ಹೆಚ್ಚು ಹಾಸಿಗೆಗಳಿಗೆ ವ್ಯವಸ್ಥೆ ಇದೆ. 1950 ರ ದಶಕದಲ್ಲಿ ಸೋವಿಯತ್ ಜನತೆ ದಾನ ಮಾಡಿದ ಮೈತ್ರಿ ಆಸ್ಪತ್ರೆ ಇಲ್ಲಿಯ ಹೊಸ ಆಸ್ಪತ್ರೆಗಳಲ್ಲೊಂದು.

 	ಬೀಜಿಂಗ್ ವಿಶ್ವವಿದ್ಯಾಲಯ 1898 ರಲ್ಲಿ ಸ್ಥಾಪಿತವಾಯಿತು. ಅದರಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಚೀನ ಜನತಾ ವಿಶ್ವವಿದ್ಯಾಲಯ, ಸೈದ್ಧಾಂತಿಕ ಪ್ರಶಿಕ್ಷಣ ಸಂಸ್ಥೆ. ಜನಾಂಗಗಳ ಕೇಂದ್ರ ಸಂಸ್ಥೆ. ಬೀಜಿಂಗ್ ನಾರ್ಮಲ್ ಕಾಲೇಜು, ಬೀಜಿಂಗ್ ವೈದ್ಯಕೀಯ ಕಾಲೇಜು, ಕೇಂದ್ರೀಯ ಸಂಗೀತ ಶಿಕ್ಷಣ ಶಾಲೆ, ಉಕ್ಕು ಮತ್ತು ಕಬ್ಬಿಣ ಸಂಸ್ಥೆ, ವಾಯುಯಾನ ಅಭಿಯಂತ ಸಂಸ್ಥೆ, ಪೆಟ್ರೋಲ್ ಸಂಸ್ಥೆ, ಭೂವೈಜ್ಞಾನಿಕ ಪೂರ್ವೇಕ್ಷಣ ಸಂಸ್ಥೆ. ಬೀಜಿಂಗ್ ಅರಣ್ಯ ಶಾಸ್ತ್ರ ಸಂಸ್ಥೆ, ಬೀಜಿಂಗ್ ಕೃಷಿ ಯಂತ್ರ ಸಂಸ್ಥೆ ಹಾಗೂ ವಿಜ್ಞಾನಗಳ ಅಕಾಡೆಮಿ-ಇವು ನಗರದ ಶಿಕ್ಷಣ ವಲಯದಲ್ಲಿರುವ ಇತರ ಮುಖ್ಯ ಸಂಸ್ಥೆಗಳು.

	ಬೀಜಿಂಗಿನಲ್ಲಿ ಅನೇಕ ಶ್ರೇಷ್ಠ ಸಾಂಸ್ಕøತಿಕ ಸಂಸ್ಥೆಗಳೂ, ವಾಚನಾಲಯಗಳೂ, ವಸ್ತು ಸಂಗ್ರಹಾಲಯಗಳೂ, ನಾಟಕ ಗೃಹಗಳೂ ಇವೆ. ಬೀಜಿಂಗ್ ವಾಚನಾಲಯ ಚೀನಾದಲ್ಲಿ ಅತ್ಯಂತ ದೊಡ್ಡದು. ಇಲ್ಲಿ 70,000,000 ಗ್ರಂಥಗಳಿವೆ. ಬೀಜಿಂಗ್ ವೃತ್ತ ಪತ್ರಿಕೆಗಳ ನಿಯತ ಕಾಲಿಕಗಳ ಹಾಗೂ ಗ್ರಂಥಗಳ ಪ್ರಧಾನ ಪ್ರಕಾಶನ ಕೇಂದ್ರ. ಇಲ್ಲಿ 40 ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳಿವೆ. ಚೀನದ ಪ್ರಧಾನ ಪ್ರಸಾರ ಕೇಂದ್ರ ಬೀಜಿಂಗಿನಲ್ಲಿದೆ.							
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ